ಎಲ್ಲರೂ ಬಾಚಿ ಚಪ್ಪರಿಸಿ ತಿನ್ನುವ ಒಗ್ಗರಣೆ ಶ್ಯಾವಿಗೆ ಹೇಗೆ ಮಾಡುವುದು ಗೊತ್ತೇ?? ಸುಲಭ ಮತ್ತು ವೇಗವಾಗಿ ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಶ್ಯಾವಿಗೆಯನ್ನು ಹಲವು ವಿಧದ ಖಾಧ್ಯ ತಯಾರಿಕೆಯಲ್ಲಿ ಬಳಸಬಹುದು. ಅದರಲ್ಲೂ ಶ್ಯಾಮಿಗೆಯ ಒಗ್ಗರಣೆ ಮಾಡಿದರೆ ಅದನ್ನು ಬೆಳಗಿನ ತಿಂಡಿಯಾಗಿಯೂ ಸಂಜೆಯ ಉಪಹಾರವಾಗಿಯೂ ಸೇವಿಸಬಹುದು. ಅದನ್ನು ಮಾಡುವುದು ಕೂಡ ಅತ್ಯಂತ ಸುಲಭ. ಹಾಗಾದ್ರೆ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ.
ಒಗ್ಗರಣೆ ಶ್ಯಾವಿಗೆ ಮಾಡಲು ಬೇಕಾಗುವ ಸಾಮಗ್ರಿಗಳು: ಶ್ಯಾವಿಗೆ ಒಂದು ಕಪ್, ಎಣ್ಣೆ ೩ ಚಮಚ, ಗೋಡಂಬಿ ಹಾಗೂ ಕಡಲೆಕಾಯಿ ಒಂದು ದೊಡ್ಡ ಚಮಚ, ಹಸಿಮೆಣಸು ೨, ಈರುಳ್ಳಿ ಒಂದು, ಸ್ವಲ್ಪ ಸಾಸಿವೆ, ಉದ್ದಿನ ಬೇಳೆ, ಒಂದು ಒಣಮೆಣಸು, ಕರಿಬೇವು ಒಗ್ಗರಣೆಗೆ. ಅರಿಶಿನ ಸ್ವಲ್ಪ, ತೆಂಗಿನ ತುರಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಗೂ ನಿಂಬೇರಸ ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನೀರು.
ಮಾಡುವ ವಿಧಾನ: ಮೊದಲಿಗೆ ಒಂದು ಪ್ಯಾನ್ ಗೆ ಒಂದು ಚಮಚ ತುಪ್ಪವನ್ನು ಹಾಕಿ ಅದರಲ್ಲಿ ಒಂದು ಸಣ್ಣ ಕಪ್ ಶ್ಯಾವಿಗೆಯನ್ನು ಹಾಕಿ ಹುರಿದುಕೊಳ್ಳಿ. ರೋಸ್ಟೆಡ್ ಶ್ಯಾವಿಗೆಯಾಗಿದ್ದರೆ, ಸ್ವಲ್ಪ ಬಿಸಿ ಮಾಡಿದರೆ ಸಾಕು. ಇಲ್ಲವಾದರೆ ಐದು ನಿಮಿಷ ಶ್ಯಾವಿಗೆಯನ್ನು ಹುರಿದು ತೆಗೆದಿಡಿ. ಇದೀಗ ಮತ್ತೊಂದು ಪ್ಯಾನ್ ಗೆ ಎರಡು ದೊಡ್ಡ ಚಮಚ ಎಣ್ಣೆಯನ್ನು ಹಾಕಿ, ಅದು ಬಿಸಿಯಾದ ಕೂಡಲೆ ಅದಕೆ ಒಂದು ಚಮಚ ಕಡಲೆಕಾಯಿ ಹಾಗೂ ಸ್ವಲ್ಪ ಗೋಡಂಬಿಯನ್ನು ಪ್ರತ್ಯೇಕವಾಗಿ ಹುರಿದು ತೆಗೆದಿಟ್ಟುಕೊಳ್ಳಿ.
ಇದೀಗ ಅದೇ ಪ್ಯಾನ್ ಗೆ ಸ್ವಲ್ಪ ಸಾಸಿವೆ ಹಾಗೂ ಉದ್ದಿನ ಬೇಳೆ, ಒಂದು ಒಣಮೆಣಸು, ಕರಿಬೇವಿನ ಎಲೆಗಳು, ಹಸಿಮೆಣಸು ಉದ್ದಕ್ಕೆ ಹೆಚ್ಚಿಟ್ಟುಕೊಂಡಿದ್ದು, ಹೆಚ್ಚಿಟ್ಟುಕೊಂಡ ಒಂದು ದೊಡ್ಡ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನವನ್ನೂ ಸೇರಿಸಿ, ಮೊದಲು ನೀರನ್ನು ಹಾಕದೆ ಎಣ್ಣೆಯಲ್ಲಿಯೇ ಈರುಳ್ಳಿಯನ್ನು ಬಾಡಿಸಿಕೊಳ್ಳಿ. ನಂತರ ಒಂದುವರೆ ಕಪ್ ನಷ್ಟು ನೀರನ್ನು ಸೇರಿಸಿ. ಬಿಸಿ ನೀರನ್ನು ಹಾಕಿದರೆ ಒಳ್ಳೆಯದು. ಇದನ್ನು ಮುಚ್ಚಳ ಮುಚ್ಚಿ ಕುದಿಸಿ. ನಂತರ ಉಪ್ಪನ್ನು ಹಾಕಿ ಹುರಿದ ಶ್ಯಾವಿಗೆಯನ್ನು ಹಾಕಿ ೩ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ನೀರು ಆರಿದ ನಂತರ ಅದಕ್ಕೆ ಸ್ವಲ್ಪ ತೆಂಗಿನತುರಿ,ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸವನ್ನು ಹಾಕಿದರೆ ರುಚಿಕರವಾದ ಒಗ್ಗರಣೆ ಶ್ಯಾವಿಗೆ ಸವಿಯಲಿ ಸಿದ್ಧ. ಮಕ್ಕಳಿಗೆ ಶಾಲೆಯಿಂದ ಬಂದ ನಂತರ ತಿನ್ನಲು ಇದನ್ನು ಮಾಡಿಕೊಡಬಹುದು.